ಪಾತಿಮೋಕ್ಖ- 
ಇದು ವಿನಯಪಿಟಕದ ಮುಖ್ಯಭಾಗ. ಇದರಲ್ಲಿ ಭಿಕ್ಷುವಾದವನಿಗೆ ನಿಷಿದ್ಧವೆನಿಸಿದ 227 ಕ್ರಿಯೆಗಳನ್ನು ಹೇಳಿ ಒಂದೊಂದಕ್ಕೂ ಪ್ರಾಯಶ್ಚಿತ್ತವನ್ನು ವಿಧಿಸಿದ್ದಾರೆ. ಈ ನಿಯಮಾವಳಿಯನ್ನು ಭಿಕ್ಷುಗಳು ವಿಹಾರದಲ್ಲಿ ಹುಣ್ಣಿಮೆ, ಅಮಾವಾಸ್ಯೆಗಳಂದು ಪಾರಾಯಣ ಮಾಡುತ್ತಾರೆ. ಇದಕ್ಕೆ ಉಪೋಸಥವೆಂದು ಹೆಸರು. ಬೌದ್ಧಸಂಘ ರೂಪುಗೊಂಡ ಅನಂತರ ಸಂಘದ ಸಂಘಟನೆಗಾಗಿ ನಿಯುಕ್ತವಾದ ಈ ನಿಯಮಾವಳಿ ತ್ರಿಪಿಟಕದ ಮೂಲಭಾಗಗಳಲ್ಲಿ ಸೇರಿಲ್ಲವೆಂಬುದು ಸ್ಪಷ್ಟವಾಗಿದೆ. ಭಿಕ್ಷುವನ್ನು ಪಾತಿಮೋಕ್ಖ ಸಂವರ ಸಂಯುತನೆಂದು ನಿರ್ದೇಶಿಸುತ್ತಾರೆ. ಪಾತಿಮೋಕ್ಖವೆಂಬುದು ಒಂದು ಕಟ್ಟು, ಕಟ್ಟಳೆ ಅದರಿಂದ ಭಿಕ್ಷುವಿನ ನಡೆನುಡಿಗಳು ನಿರುದ್ಧವಾಗಿರುತ್ತವೆ. ಇದರಲ್ಲಿ ಸೇರಿದ ನಿಯಮವನ್ನು ಉಲ್ಲಂಘಿಸಿದ ಭಿಕ್ಷು ಉಪೋಸಥದಲ್ಲಿ ಉಳಿದೆಲ್ಲ ಭಿಕ್ಷುಗಳ ಸಮ್ಮುಖದಲ್ಲಿ ತಪ್ಪನ್ನು ಒಪ್ಪಿಕೊಳ್ಳಬೇಕೆಂಬ ವಿಧಿಯಿದೆ. ಪಾಳಿ ಪಾತಿಮೋಕ್ಖವಲ್ಲದೆ ಸಂಸ್ಕøತದ ಪ್ರಾತಿಮೋಕ್ಷವೂ ಟಿಬೆಟನ್ ಮತ್ತು ಚೀನೀ ಭಾಷೆಗಳಲ್ಲಿವೆ.
(ಎಸ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ